ಜಾರಕಿಹೊಳಿ ಬಣ ಸಂಪೂರ್ಣ ‌ಹಿಡಿತ; ಜೊಲ್ಲೆ, ದೊಡ್ಡಗೌಡ್ರ, ಕುಲಗೋಡೆ ಅಧ್ಯಕ್ಷ ಸ್ಥಾನದ ರೇಸಿನಲ್ಲಿ.

ಜಾರಕಿಹೊಳಿ ಬಣ ಸಂಪೂರ್ಣ ‌ಹಿಡಿತ; ಜೊಲ್ಲೆ, ದೊಡ್ಡಗೌಡ್ರ, ಕುಲಗೋಡೆ ಅಧ್ಯಕ್ಷ ಸ್ಥಾನದ ರೇಸಿನಲ್ಲಿ

ಬೆಳಗಾವಿ ಡಿಸಿಸಿ ಬ್ಯಾಂಕಿನ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆ
*ಸಚಿವ ಸತೀಶ್ ಜಾರಕಿಹೊಳಿ‌ ಅಂಪೈರ್*

*ಇಂದು ರಾತ್ರಿ ಜಾರಕಿಹೊಳಿಯವರ ಅಧ್ಯಕ್ಷತೆಯಲ್ಲಿ ಜರುಗುವ ಸಭೆಯಲ್ಲಿ ಸ್ಪರ್ಧಾಕಾಂಕ್ಷಿಗಳ ಹೆಸರು ಫೈನಲ್* 

*ಬೆಳಗಾವಿ* ತೀವ್ರ ಕುತೂಹಲ ಕೆರಳಿಸಿರುವ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯು ನಾಳೆ ಸೋಮವಾರ ಜರುಗಲಿದೆ.

ಈ ಸಂಬಂಧ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಬೆಳಗಾವಿಯ ಖಾಸಗಿ ಹೋಟೆಲಿನಲ್ಲಿ ಶನಿವಾರ ರಾತ್ರಿ ನಿರ್ದೇಶಕರ ಸಭೆ ನಡೆಸಿದರು. ನಾಳಿನ ಚುನಾವಣೆಯಲ್ಲಿ ನಮ್ಮ ಬಣದವರೇ ಎರಡೂ ಸ್ಥಾನಗಳನ್ನು ಅಲಂಕರಿಸಲಿದ್ದು, ನಮ್ಮವರೇ ಐದು ವರ್ಷಗಳ ಅಧಿಕಾರವನ್ನು ನಡೆಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ 19 ರಂದು ಬೆಳಗಾವಿ ಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿಗೆ ಚುನಾವಣೆ ನಡೆದಿದ್ದು, ಇದರಲ್ಲಿ ಜಾರಕಿಹೊಳಿ ಬಣದ 11 ಜನರು ಆಯ್ಕೆಯಾಗಿ ಸ್ಪಷ್ಟ ಬಹುಮತವನ್ನು ಪಡೆದುಕೊಂಡಿದ್ದಾರೆ. 

ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿಯವರೊಂದಿಗೆ ಮತ್ತೊಂದು ಸುತ್ತಿನ ಸಭೆಯ ನಂತರ ಅಧ್ಯಕ್ಷ- ಉಪಾಧ್ಯಕ್ಷರ ಹೆಸರುಗಳು ಅಂತಿಮವಾಗಲಿವೆ. ಸೋಮವಾರಕ್ಕೂ ಮುನ್ನ ರವಿವಾರದಂದು ಸಂಜೆ ಸತೀಶ್ ಜಾರಕಿಹೊಳಿಯವರ ‌ಅಧ್ಯಕ್ಷತೆಯಲ್ಲಿ ಬ್ಯಾಂಕಿನ ನಿರ್ದೇಶಕರು ಸಭೆ ಸೇರಲಿದ್ದಾರೆ.
ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಕರೆದ ಸಭೆಯಲ್ಲಿ ಬ್ಯಾಂಕಿನ ನಿರ್ದೇಶಕರಾದ ಅಣ್ಣಾಸಾಹೇಬ್ ಜೊಲ್ಲೆ, ವಿಶ್ವಾಸ ವೈದ್ಯ, ಬಾಬಾ ಸಾಹೇಬ್ ಪಾಟೀಲ, ಚನ್ನರಾಜ ಹಟ್ಟಿಹೊಳಿ, ಮಹಾಂತೇಶ ದೊಡ್ಡಗೌಡ್ರ, ಅರವಿಂದ ಪಾಟೀಲ, ಅಪ್ಪಾಸಾಹೇಬ ಕುಲಗೋಡೆ, ಅಮರನಾಥ ಜಾರಕಿಹೊಳಿ, ರಾಹುಲ್ ಜಾರಕಿಹೊಳಿ, ನೀಲಕಂಠ ಕಪ್ಪಲಗುದ್ದಿ, ವಿರುಪಾಕ್ಷ ಮಾಮನಿ ಅವರು ಪಾಲ್ಗೊಂಡಿದ್ದರು.

ತಟಸ್ಥ ಬಣದಲ್ಲಿ ಗುರುತಿಸಿಕೊಂಡಿರುವ ಶಾಸಕರಾದ ಭರಮಗೌಡ ಕಾಗೆ ಮತ್ತು ಗಣೇಶ್ ಹುಕ್ಕೇರಿ ಅವರು ಸತೀಶ್ ಜಾರಕಿಹೊಳಿಯವರು ರವಿವಾರದಂದು ಸಂಜೆ ಕರೆದಿರುವ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಇವರು ಭಾಗವಹಿಸಿ ಜಾರಕಿಹೊಳಿಯವರ ಬಣವನ್ನು ಬೆಂಬಲಿಸಿದರೆ 13 ಸ್ಥಾನಗಳ ಬೆಂಬಲ ಜಾರಕಿಹೊಳಿಯವರಿಗೆ ಸಿಕ್ಕಂತಾಗುತ್ತದೆ. 

ಒಟ್ಟಿನಲ್ಲಿ ನಾಳೆಯೇ ಬ್ಯಾಂಕಿನ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯು ನಿಗದಿಯಾಗಿದ್ದು, ಬಾಲಚಂದ್ರ ಜಾರಕಿಹೊಳಿಯವರು ಚುನಾವಣೆ ಸಂದರ್ಭದಲ್ಲಿ ನೀಡಿರುವ ಭರವಸೆಯಂತೆ ಲಿಂಗಾಯತ ಸಮುದಾಯದ ವ್ಯಕ್ತಿಯೊಬ್ಬರು ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುವ ಲಕ್ಷಣಗಳು ಕಂಡು ಬರುತ್ತಿವೆ.

ಒಂದು ವೇಳೆ ಚುನಾವಣೆ ನಡೆದರೆ ಸರ್ಕಾರದಿಂದ ನಾಮಕರಣಗೊಂಡಿರುವ ರಾಮದುರ್ಗ ಶಾಸಕ ಅಶೋಕ ಪಟ್ಟಣ, ಅಪೇಕ್ಸ್ ಬ್ಯಾಂಕ್ ಪ್ರತಿನಿಧಿ ಮತ್ತು ಬೆಳಗಾವಿ ಉಪ ನಿಬಂಧಕರು ಮತ ಚಲಾಯಿಸುವ ಅಧಿಕಾರವನ್ನು ಹೊಂದಿದ್ದಾರೆ. 

ಸತೀಶ್ ಜಾರಕಿಹೊಳಿಯವರ ಬಣವು ಸಂಪೂರ್ಣ ಬಹುಮತವನ್ನು ಪಡೆದಿದ್ದು, ಈ ಬಣದವರೇ ಅಧ್ಯಕ್ಷ- ಉಪಾಧ್ಯಕ್ಷರಾಗಲಿದ್ದಾರೆ.

ಜಾರಕಿಹೊಳಿಯವರ ಬಣದಿಂದ ಅಧ್ಯಕ್ಷ ಗಾದಿಗೆ ಅಣ್ಣಾಸಾಹೇಬ ಜೊಲ್ಲೆ, ಮಹಾಂತೇಶ ದೊಡ್ಡಗೌಡ್ರ, ಅಪ್ಪಾಸಾಹೇಬ ಕುಲಗೋಡೆ ಅವರ ಹೆಸರುಗಳು ಕೇಳಿ ಬರುತ್ತಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ನೀಲಕಂಠ ಕಪ್ಪಲಗುದ್ದಿ ಮತ್ತು ಅರವಿಂದ ಪಾಟೀಲ್ ‌ಅವರ ಹೆಸರುಗಳು ಕೇಳಿ ಬರುತ್ತಿವೆ.
ನಾಳೆ ಸೋಮವಾರದಂದು ಮುಂಜಾನೆ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯ ಪ್ರಕ್ರಿಯೆಗಳು ಆರಂಭಗೊಳ್ಳಲಿದ್ದು, ಮಧ್ಯಾಹ್ನ 3.00 ಗಂಟೆ ನಂತರ ಫಲಿತಾಂಶವು ಪ್ರಕಟಗೊಳ್ಳಲಿದೆ.

Post a Comment

0 Comments